
ಕ್ಷಣಕ್ಷಣದಿಂದ ಕ್ಷಣಕ್ಕೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಬೆನ್ನಲ್ಲೇ, ಐಪಿಎಲ್ ಅನ್ನು ತಾತ್ಕಲಿಕವಾಗಿ ರದ್ದುಪಡಿಸುವ ಮಹತ್ವದ ತೀರ್ಮಾನವನ್ನು ಬಿಸಿಸಿಐ ತೆಗೆದುಕೊಂಡಿದೆ. ಗುರುವಾರ ಸಂಜೆ ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂಜಾಬ್- ದೆಹಲಿ ಪಂದ್ಯವನ್ನು ಸುರಕ್ಷತೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ, ಈ ಸಮಯದಲ್ಲಿ ಮನೋರಂಜನೆ ಬೇಡ ಎನ್ನುವ ಕಾರಣಕ್ಕೆ ಹಾಗೂ ಆಟಗಾರರ ಭದ್ರತೆಯ ದೃಷ್ಟಿಯಿಂದ 18ನೇ ಆವೃತ್ತಿಯ ಐಪಿಎಲ್ ಅನ್ನು ತಾತ್ಕಲಿಕವಾಗಿ ಮುಂದೂಡುವ ಮಹತ್ವದ ತೀರ್ಮಾನವನ್ನು ಬಿಸಿಸಿಐ ಹಾಗೂ ಐಪಿಎಲ್ ಕಾರ್ಯಕಾರಿ ಮಂಡಳಿ ತೆಗೆದುಕೊಂಡಿದೆ. ಬಿಸಿಸಿಐನ ಈ ತೀರ್ಮಾನವನ್ನು ಐಪಿಎಲ್ ಫ್ರಾಂಚೈಸಿಗಳು ಸ್ವಾಗತಿಸಿದ್ದು, “ದೇಶ ಮೊದಲು; ಇಂತಹ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ದೇಶ ಹಾಗೂ ಸೇನೆಯೊಂದಿಗೆ ನಾವೆಲ್ಲ ಇದ್ದೇವೆ” ಎನ್ನುವ ಪೋಸ್ಟ್‌ಗಳನ್ನು ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲ ತಂಡಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಬಾಕಿಯಿರುವ 16 ಪಂದ್ಯಗಳನ್ನು ಪರಿಸ್ಥಿತಿ ತಿಳಿಗೊಂಡ ಬಳಿಕ ನಡೆಸಲಾಗುವುದೋ ಅಥವಾ ಇಡೀ ಸೀಸನ್ ಅನ್ನೇ ರದ್ದುಗೊಳಿಸಲಾಗುವುದೋ ಎನ್ನುವ ಸ್ಪಷ್ಟನೆ ಸಿಕ್ಕಿಲ್ಲ.