
ಹುಬ್ಬಳ್ಳಿ: ಪ್ರಧಾನಮಂತ್ರಿ ಮೋದಿಯವರ ಪ್ರತಿಯೊಂದು ಹೆಜ್ಜೆಯನ್ನು ಟೀಕೆ ಮಾಡುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಗಡಿಗೆ ಹೋಗಿ ಅಲ್ಲಿಯೇ ಜನರಿಗೆ ಧೈರ್ಯ ತುಂಬುವ ಕೆಲಸವನ್ನ ಮೋದಿ ಮಾಡ್ತಾ ಇದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಒಮ್ಮೆ ದೇಶದ ಬಾರ್ಡರ್ ಗೆ ಹೋಗಿ ಬರಲಿ. ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಚಿಲ್ಲರೇ ಹೇಳಿಕೆ ನೀಡುತ್ತಿದ್ದಾರೆ. ಸಂತೋಷ್ ಲಾಡ್ ಕೇವಲ ಕಲಘಟಗಿಗೆ ಮತ್ತು ಕೊತ್ತುರ ಮಂಜುನಾಥ ಕೋಲಾರಕ್ಕೆ ಮಾತ್ರ ನಾಯಕರು, ಇವರು ರಾಷ್ಟ್ರೀಯ ನಾಯಕರಲ್ಲ, ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತರಾದವರು ಎಂದು ಅವರು ಟೀಕೆ ಮಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಶೂನ್ಯ. ಕಾಂಗ್ರೆಸ್‌ನ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಹಣವನ್ನು ಅಪ್ಪರ್ ಕೃಷ್ಣಗೆ ಉಪಯೋಗಿಸಿ ಕೊಳ್ಳಿ. ಆದ್ರೆ ಇಂತಹ ಸಮಯದಲ್ಲಿ ೨ ವರ್ಷ ಸಾಧನಾ ಸಮಾವೇಶ ಯಾವುದಕ್ಕಾಗಿ. ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ. ಜಾಹೀರಾತಿಗಾಗಿ ಹಣ ಪೋಲು ಮಾಡುತ್ತಿದ್ದಾರೆ. ಈ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದರು.
ಬೆಳಗಾವಿಯಲ್ಲಿ ಕುರಾನ್ ಸುಟ್ಟು ಹಾಕಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರು ಅವರ ಮೇಲೆ ಕ್ರಮ ಆಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಆರಂಭವಾಗಿದೆ. ಇದೇ ಒಳಜಗಳದಿಂದ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯವರನ್ನ ಕೆಳಗಿಳಿಸುತ್ತಾರೆ, ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದರು.