ಉನ್ನತ ಸುದ್ದಿ
Trending

ಧಾರವಾಡದ ಎಸ್ ಡಿ ಎಂ ನಾರಾಯಣ ಹಾರ್ಟ್‌ ಸೆಂಟರ್‌ ನಲ್ಲಿ ಅತ್ಯಾಧುನಿಕ ಟಿಎವಿಆರ್ ಚಿಕಿತ್ಸೆ ಯಶಸ್ವಿ

ಧಾರವಾಡ, :- ಹೃದಯ ಚಿಕಿತ್ಸೆ ವಿಭಾಗದಲ್ಲಿ ಹೆಸರು ಗಳಿಸಿರುವ ಧಾರವಾಡದ ಸತ್ತೂರಿನ ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್ ಇದೀಗ ಟಿಎವಿಆರ್ ಎಂಬ ಅತ್ಯಾಧುನಿಕ ಹೃದಯ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಅತ್ಯಾಧುನಿಕ, ಉನ್ನತ ಮಟ್ಟದ ಹೃದಯ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಬಲ್ಲದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಈ ಮೂಲಕ ಸಂಕೀರ್ಣ ಹೃದಯ ಸಮಸ್ಯೆ ಹೊಂದಿರುವ ರೋಗಿಗಳ ಬದುಕಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸಿದೆ.

ಇತ್ತೀಚೆಗೆ ಆಸ್ಪತ್ರೆಯು ಅತ್ಯಂತ ಸಂಕೀರ್ಣ ಹೃದಯ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದೆ. ಈ ಮೂಲಕ ಗಂಭೀರವಾಗಿ ಅಸ್ವಸ್ಥರಾಗಿದ್ದ ರೋಗಿಯ ಆರೋಗ್ಯವನ್ನು ಸುಧಾರಿಸಿ ಅವರಿಗೆ ಹೊಸ ಜೀವನವನ್ನು ನೀಡಿದೆ. ಈ ಸಾಧನೆಯು ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಚಿಕಿತ್ಸೆ ಒದಗಿಸುತ್ತಿರುವ, ಹೃದಯ ಚಿಕಿತ್ಸೆಗಳಿಗೆ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಈ ಆಸ್ಪತ್ರೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಿರಿಯ ವಯಸ್ಸಿನ ದಯಾನಂದ (ಹೆಸರು ಬದಲಾಯಿಸಲಾಗಿದೆ) ಎಂಬವರು ಕಳೆದ ಐದು ತಿಂಗಳಲ್ಲಿ ಎದೆನೋವಿನಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿದಾಗ ಅವರಿಗೆ ತೀವ್ರ ರೀತಿಯ ಕ್ಯಾಲ್ಸಿಫಿಕ್ ಅಯೋರ್ಟಿಕ್ ಸ್ಟೆನೋಸಿಸ್ ಮತ್ತು ಕೊರೋನರಿ ಧಮನಿಯ (ಕೊರೋನರಿ ಆರ್ಟರಿ) ಕಾಯಿಲೆ ಇರುವುದು ಪತ್ತೆಯಾಯಿತು. ಈ ಎರಡೂ ಸಮಸ್ಯೆಗಳು ಜೀವಕ್ಕೆ ಅಪಾಯ ಉಂಟು ಮಾಡಬಹುದಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿತ್ತು. ತಕ್ಷಣವೇ ಅವರನ್ನು ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್ ಗೆ ದಾಖಲಿಸಲಾಯಿತು. ಅಲ್ಲಿ ಹೃದಯ ತಜ್ಞ ಡಾ. ರವಿ ಎಸ್. ಜೈನಾಪುರ್ ಅವರು ರೋಗಿಯನ್ನು ಪರೀಕ್ಷಿಸಿ ವಿಶೇಷ ಚಿಕಿತ್ಸಾ ಯೋಜನೆಯನ್ನು ರೂಪಿಸಿದರು.

ಮೊದಲಿಗೆ ರೋಗಿಯ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರಮುಖ ಧಮನಿಗಳಲ್ಲಿ ಒಂದಾಗಿರುವ ಲೆಫ್ಟ್ ಆಂಟೀರಿಯರ್ ಡಿಸೆಂಡಿಂಗ್ (ಎಲ್ಎಡಿ) ಧಮನಿಯ ಮಧ್ಯ ಭಾಗದಲ್ಲಿ ಸ್ಟೆಂಟ್ ಹಾಕುವ ಮೂಲಕ ಪರ್ಕ್ಯುಟೇನಿಯಸ್ ಟ್ರಾನ್ಸ್‌ ಲುಮಿನಲ್ ಕೊರೋನರಿ ಆಂಜಿಯೋಪ್ಲಾಸ್ಟಿ (ಪಿಟಿಸಿಎ) ಚಿಕಿತ್ಸೆ ನಡೆಸಲಾಯಿತು. ನಂತರ ರಕ್ತದ ಹರಿವನ್ನು ತಡೆದು ರೋಗಿಯ ಆರೋಗ್ಯವನ್ನು ಕ್ಷೀಣಿಸುವಂತೆ ಮಾಡುತ್ತಿದ್ದ ಕಿರಿದಾದ ಅಯೋರ್ಟಿಕ್‌ ವಾಲ್ವ್ ಅನ್ನು ಬದಲಿಸುವ ಅತ್ಯಾಧುನಿಕ ಟ್ರಾನ್ಸ್‌ ಕ್ಯಾಥಿಟರ್ ಅಯೋರ್ಟಿಕ್‌ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎವಿಆರ್) ಚಿಕಿತ್ಸೆ ನಡೆಸಲಾಯಿತು.

ಟಿಎವಿಆರ್‌ ಚಿಕಿತ್ಸೆಯ ಲಾಭಗಳನ್ನು ವೈದ್ಯರಿಂದ ಅರಿತ ರೋಗಿ ಮತ್ತು ಅವರ ಕುಟುಂಬವು ಟಿಎವಿಆರ್ ವಿಧಾನವನ್ನು ಆರಿಸಿಕೊಂಡ ಕಾರಣ ಈ ಅತ್ಯಾಧುನಿಕ ಚಿಕಿತ್ಸೆ ನೀಡಲಾಯಿತು. ಸೂಕ್ತ ಪರೀಕ್ಷೆಯ ಬಳಿಕ ರೋಗಿಯು ಡಿಸ್ಚಾರ್ಜ್‌ ಮಾಡಲಾಯಿತು.

ಈ ಸಂಧರ್ಭದಲ್ಲಿ ಟಿಎವಿಆರ್ ಚಿಕಿತ್ಸೆ ಪ್ರಯೋಜನಗಳನ್ನು ತಿಳಿಸಿದ ಡಾ. ರವಿ ಜೈನಾಪುರ್ ಅವರು, “ಅಯೋರ್ಟಿಕ್ ಸ್ಟೆನೋಸಿಸ್ ಚಿಕಿತ್ಸೆಯಲ್ಲಿ ಅದರಲ್ಲೂ ವಿಶೇಷವಾಗಿ ಓಪನ್- ಹಾರ್ಟ್‌ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಿಲ್ಲದ ರೋಗಿಗಳಿಗೆ ಟ್ರಾನ್ಸ್‌ ಕ್ಯಾಥಿಟರ್ ಅಯೋರ್ಟಿಕ್‌ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎವಿಆರ್) ಚಿಕಿತ್ಸೆ ಒಂದು ಮಹತ್ವದ ಚಿಕಿತ್ಸೆಯಾಗಿದೆ. ಸಾಂಪ್ರದಾಯಿಕ ಕವಾಟ ಬದಲಾವಣೆ ಚಿಕಿತ್ಸೆಗಿಂತ ಭಿನ್ನವಾಗಿರುವ ಟಿಎವಿಆರ್ ಚಿಕಿತ್ಸೆ ಅಷ್ಟೊಂದು ತೀವ್ರಗತಿಯ ಚಿಕಿತ್ಸೆ ಅಲ್ಲವಾದ್ದರಿಂದ ಕಡಿಮೆ ಆಸ್ಪತ್ರೆ ವಾಸ ಸಾಕಾಗುತ್ತದೆ. ಈ ಚಿಕಿತ್ಸಾ ಪ್ರಕರಣದಲ್ಲಿ ಕೇವಲ ಒಂದೇ ಗಂಟೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ನಡೆದ ನಾಲ್ಕನೇ ದಿನದಂದು ರೋಗಿಯು ಡಿಸ್ಚಾರ್ಜ್‌ ಆದರು” ಎಂದು ಹೇಳಿದರು.

ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್ ನ ಫೆಸಿಲಿಟ್ ಡೈರೆಕ್ಟರ್ ಆಗಿರುವ ಶ್ರೀ ಶಶಿಕುಮಾರ್ ಐ. ಪಟ್ಟಣಶೆಟ್ಟಿ ಅವರು ವೈದ್ಯಕೀಯ ತಂಡವನ್ನು ಅಭಿನಂದಿಸಿ ಮಾತನಾಡಿ, “ಈ ಯಶಸ್ವಿ ಚಿಕಿತ್ಸೆಯು ಈ ಭಾಗದಲ್ಲಿ ವಿಶ್ವದರ್ಜೆಯ ಹೃದಯ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಗೆ ಉತ್ತಮ ಪುರಾವೆಯಾಗಿದೆ. ನಮ್ಮ ತಂಡದ ಪರಿಣತಿ ಮತ್ತು ರೋಗಿ ಕೇಂದ್ರಿತ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ನಾವು ರೋಗಿಗಳಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆ ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!