ಉನ್ನತ ಸುದ್ದಿ
Trending

ಜು.೧೩ರ ಕಾಶ್ಮೀರ ಸಮಾವೇಶಕ್ಕೆ ಬೆಂಬಲ: ಮುತಾಲಿಕ

ಹುಬ್ಬಳ್ಳಿ: ಕಳೆದ ೩೫ ವರ್ಷದಿಂದ ಕಾಶ್ಮೀರದ ಹಿಂದೂಗಳ ಸುರಕ್ಷತೆಗಾಗಿ ಹೋರಾಡುತ್ತಿರುವ ಪನೂನುಕಾಶ್ಮೀರ ಸಂಘಟನೆಗೆ ಬೆಂಬಲಿಸಲು ಜುಲೈ ೧೩ ರಂದು ಕಾಶ್ಮೀರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

೩೫ ವರ್ಷಗಳಿಂದ ಐದು ಲಕ್ಷಕ್ಕೂ ಅಧಿಕ ಕಾಶ್ಮೀರ ಹಿಂದೂಗಳು ಅತಂತ್ರರಾಗಿದ್ದಾರೆ. ಅವರು ತಮ್ಮ ಮೂಲ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಮನೆ, ದೇವಸ್ಥಾನ ಪುನಃ ನಿರ್ಮಿಸಲಾಗುತ್ತಿಲ್ಲ, ಅಷ್ಟೇ ಅಲ್ಲದೇ ಅವರು ತೋಟ, ಗದ್ದೆಗಳನ್ನು ಪಡೆಯಲಾಗುತ್ತಿಲ್ಲ, ಅಲ್ಲಿನ ಕಾಶ್ಮೀರ ಹಿಂದೂಗಳು ಸಂತ್ರಸ್ತರಾಗಿದ್ದಾರೆ. ಅವರಿಗೆ ಯಾವೊಂದು ಸವಲತ್ತುಗಳು ಸಿಗುತ್ತಿಲ್ಲ, ಈ ದಿಸೆಯಲ್ಲಿ ಕೇಂದ್ರ ಹಾಗೂ ಸ್ಥಳೀಯ ರಾಜ್ಯ ಸರ್ಕಾರ ಕಾಶ್ಮೀರ ಹಿಂದೂಗಳಿಗೆ ರಕ್ಷಣೆ ಹಾಗೂ ಸವಲತ್ತುಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಹೋರಾಟದ ಹಾದಿಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಮಾವೇಶದಲ್ಲಿ ಮುಖ್ಯವಾಗಿ ಐದು ಲಕ್ಷ ಕಾಶ್ಮೀರಿ ಹಿಂದೂಗಳಿಗೆ ಸವಲತ್ತುಗಳು ಒದಗಿಸಿ, ರಕ್ಷಣೆ ನೀಡುವುದು, ಹಿಂದೂಗಳ ಮನೆ, ತೋಟ, ಗುಡಿ, ಮಠ ಹಾಗೂ ಪವಿತ್ರ ಕ್ಷೇತ್ರಗಳನ್ನು ಒದಗಿಸಬೇಕು, ಸರ್ಕಾರದಿಂದ ಮನೆಗೆ ಶಸ್ತ್ರ ಒದಗಿಸುವುದು, ಕಾಶ್ಮೀರ ಹಿಂದೂಗಳಿಗೆ ರಾಜಕೀಯ ಪ್ರತಿನಿಧಿ ಮೀಸಲು ಕೊಡಬೇಕೆಂದು ಒತ್ತಾಯ ಮಾಡಲಾಗುವುದು. ಅಂದು ಮುಂದಿನ ಹೋರಾಟದ ಕುರಿತಾಗಿ ಪ್ರಮುಖ ಚರ್ಚೆಗಳನ್ನು ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೆಹಲ್ಗಾಮ್‌ನಲ್ಲಿ ನಡೆದ ಘಟನೆ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಎಲ್ಲ ರೀತಿಯ ಬಹಿಷ್ಕಾರವನ್ನು ಕೇಂದ್ರ ಸರ್ಕಾರ ಹಾಕಿದೆ. ಹೀಗಿರುವಾಗ ಪಾಕಿಸ್ತಾನದ ಜೊತೆ ಹಾಕಿ ಆಟವನ್ನು, ಬಾಂಗ್ಲಾದೇಶದ ಜೊತೆಗೆ ಕ್ರಿಕೆಟ್ ಆಟವಾಡಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.

ಪೆಹಲ್ಗಾಮ್ ಗಾಯ, ನೋವು ಇನ್ನೂ ಮಾಯವಾಗಿಲ್ಲ, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಆಟದ ಮೂಲದ ನಡೆಯುವ ಹಣಕಾಸಿನ ವ್ಯವಹಾರ ಮುಖ್ಯವೋ? ಅಥವಾ ಜನರ ಸುರಕ್ಷತೆ ಮುಖ್ಯವೋ? ಎಂಬುದನ್ನು ಸರ್ಕಾರ ಉತ್ತರ ನೀಡಬೇಕು. ಕೇಂದ್ರ ಸರ್ಕಾರಕ್ಕೆ ತಮ್ಮ ಸ್ವಾರ್ಥಕ್ಕೆ ಇನ್ನೆಷ್ಟು ಹಿಂದೂಗಳ ನೆತ್ತರು ಬೇಕು ಎಂದು ಹರಿಹಾಯ್ದರು.

ಇನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಶೋಚನೀಯವಾಗಿದೆ. ಕೂಡಲೇ ಸರ್ಕಾರ ಈ ಎರಡು ದೇಶದ ಜೊತೆಗೆ ಆಟವನ್ನು ನಿಷೇಧ ಮಾಡಬೇಕು ಎಂದು ಹೇಳಿದರು.

ನೇಹಾ ಹಿರೇಮಠ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಅಷ್ಟಾಗ್ಯೂ ಕೂಡಾ ಕೊಲೆ ಆರೋಪಿಗೆ ಶಿಕ್ಷೆ ಆಗಿಲ್ಲ, ಕೊಲೆ ನಡೆದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ, ಮುಸ್ಲಿಂ ಅಡ್ವಕೇಟ್‌ಗಳು ಆರೋಪಿ ಪರವಾಗಿ ವಾದ ಮಾಡಲು ಯಾರೂ ಮುಂದೆ ಬರಬಾರದು ಎಂದು ಹೇಳಿದ್ದಾರೆ. ಆದರೆ ಇದೀಗ ಕೊಲೆ ಆರೋಪಿಗೆ ಜಾಮೀನು ಕೊಡಿಸಲು ಮುಸ್ಲಿಂ ವಕೀಲರು ಮುಂದೆ ಬಂದಿದ್ದಾರೆ. ಒಂದು ವೇಳೆ ಏನಾದರೂ ಕೊಲೆ ಆರೋಪಿಗೆ ಜಾಮೀನು ಸಿಕ್ಕಲ್ಲಿ ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮ ಸೇನಾದ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಅಪ್ಪಣ್ಣ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ಮಹಾನಗರ ಅಧ್ಯಕ್ಷೆ ಪೂರ್ಣಿಮಾ ಕಾಡಮ್ಮನವರ ಗೋಷ್ಠಿಯಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!