Asia Cup 2025: ಅಕ್ಷರ್ ಪಟೇಲ್ ಸ್ಥಾನ ಶುಭ್ಮನ್ ಗಿಲ್ ಪಾಲು
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಏಷ್ಯಾಕಪ್ 2025ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯನ್ ಕ್ರಿಕೆಟ್ ಕದನದಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಸೂರ್ಯಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಹೀಗಾಗಿ ಮುಂಬರುವ ಟೂರ್ನಿಗೆ ಲಭ್ಯರಿರಲಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ನಾಯಕನಾಗಿ ಕಾಣಿಸಿಕೊಂಡರೂ, ಅತ್ತ ಉಪನಾಯಕ ಬದಲಾಗುವ ಸಾಧ್ಯತೆ ಹೆಚ್ಚಿದೆ.
ಪ್ರಸ್ತುತ ಮಾಹಿತಿ ಪ್ರಕಾರ ಎಷ್ಯಾಕಪ್‌ನಲ್ಲಿ ಭಾರತ ಟಿ20 ತಂಡದ ಉಪನಾಯಕನಾಗಿ ಶುಭಮನ್ ಗಿಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇದಕ್ಕೂ ಮುನ್ನ ಅಕ್ಷರ್ ಪಟೇಕ್ ಟೀಮ್ ಇಂಡಿಯಾದ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೀಗ ಗಿಲ್ ಅವರನ್ನು ಟಿ20 ತಂಡದ ವೈಸ್ ಕ್ಯಾಪ್ಟನ್ ಆಗಿ ನೇಮಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
ಶುಭಮನ್ ಗಿಲ್ ಈಗಾಗಲೇ ಟೆಸ್ಟ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರ ನಿವೃತ್ತಿ ಬಳಿಕ ಏಕದಿನ ತಂಡದ ನಾಯಕತ್ವ ಕೂಡ ಅವರಿಗೆ ಒಲಿಯುವ ಸಾಧ್ಯತೆಯಿದೆ. ಇತ್ತ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಟಿ20 ವಿಶ್ವಕಪ್‌ವರೆಗೆ ನಾಯಕರನ್ನಾಗಿ ಮುಂದುವರೆಸಲು ನಿರ್ಧರಿಸಲಾಗಿದೆ.
ಇದಾದ ಬಳಿಕ ಭಾರತ ಟಿ20 ತಂಡದ ನಾಯಕ ಕೂಡ ಬದಲಾಗಲಿದ್ದಾರೆ. ಏಕೆಂದರೆ ಮುಂದಿನ ವರ್ಷಕ್ಕೆ ಸೂರ್ಯಕುಮಾರ್ ಯಾದವ್‌ಗೆ 35 ವರ್ಷ ತುಂಬಲಿದೆ. ಹೀಗಾಗಿ ಟಿ20 ವಿಶ್ವಕಪ್ ಬಳಿಕ ಯುವ ಆಟಗಾರನಿಗೆ ಕ್ಯಾಪ್ಟನ್ ಪಟ್ಟ ನೀಡಲು ಬಿಸಿಸಿಐ ಚಿಂತಿಸಿದೆ. ಇದಕ್ಕಾಗಿ ಈಗಲೇ ಶುಭ್ ಮನ್ ಗಿಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಿಕೊಳ್ಳಲು ಆಯ್ಕೆ ಸಮಿತಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಅದರಂತೆ ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್‌ನಲ್ಲಿ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ಉಪನಾಯಕನಾಗಿ ಶುಭಮನ್ ಗಿಲ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.
ಇನ್ನು ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಯುವ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಕಟ್ಟಲು ಪ್ಲಾನ್ ರೂಪಿಸಲಾಗಿದೆ. ಏಕೆಂದರೆ ಈ ಎಷ್ಯಾಕಪ್ ಬಳಿಕ ಭಾರತ ತಂಡವು 2026ರ ಫೆಬ್ರವರಿ-ಮಾರ್ಚ್‌ನಲ್ಲಿ ಟಿ20 ವಿಶ್ವಕಪ್ ಆಡಬೇಕಿದೆ. ಇದಕ್ಕಾಗಿ ಈಗಲೇ ಸಮತೋಲಿತ ತಂಡವನ್ನು ರೂಪಿಸಲು ನಿರ್ಧರಿಸಲಾಗಿದ್ದು ಅದರಂತೆ ಈ ಬಾರಿ ಏಷ್ಯಾಕಪ್‌ನಲ್ಲಿ ಯುವ ಪಡೆ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:
- ಭಾರತ vs ಯುಎಇ – ಸೆಪ್ಟೆಂಬರ್ 10 (ದುಬೈ)
- ಭಾರತ vs ಪಾಕಿಸ್ತಾನ್ – ಸೆಪ್ಟೆಂಬರ್ 14 (ದುಬೈ)
- ಭಾರತ vs ಒಮಾನ್ – ಸೆಪ್ಟೆಂಬರ್ 19 (ಅಬುಧಾಬಿ)
ಈ ಮೂರು ಪಂದ್ಯಗಳ ಬಳಿಕ ಸೂಪರ್-4 ಹಂತದ ಪಂದ್ಯಗಳು ನಡೆಯಲಿದೆ. ಅಂದರೆ ಮೊದಲ ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳು ಸೂಪರ್-4 ಹಂತಕ್ಕೇರಲಿದೆ. ಇನ್ನು ಸೂಪರ್ ಫೋರ್ ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.




