666
ಬೆಂಗಳೂರು: ರಾಜ್ಯದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾದ ಬಳಿಕ ಇದೀಗ ಮತ್ತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಜನರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.

ಹೌದು. ನಂದಿನಿ ಹಾಲಿನ ದರದಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಗಾಯದ ಮೇಲೆ ಬರೆ ಎಳೆಯಲು ರೆಡಿಯಾಗಿದೆ. ಹೀಗಾಗಿ ಶೀಘ್ರವೇ ಹಾಲಿನ ದರ ಏರಿಕೆ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ.
ಮೇ 21ರಂದು ಈಗಿನ ಕೆಎಂಎಫ್ (KMF) ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಮೇ 25ಕ್ಕೆ ಹೊಸ ನಿರ್ದೇಶಕರ ಆಯ್ಕೆ ಆಗಲಿದೆ. ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಮುಂದೆ ಮತ್ತೆ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲು ಚರ್ಚೆ ನಡೆಯುತ್ತಿದೆ. ಈ ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಸುಳಿವು ನೀಡಿದ್ದಾರೆ.
ಬಮುಲ್ನ 18 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಕನಕಪುರ ತಾಲೂಕು ನಿರ್ದೇಶಕ ಸ್ಥಾನಕ್ಕೆ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಿದ್ದಾರೆ. ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ಬಾಲಕೃಷ್ಣ, ಡಿಕೆ ಸುರೇಶ್ ಕೆಎಂಎಫ್ ಅಧಿಕಾರ ಹಿಡಿಯಲು ಹಲವು ಬದಲಾವಣೆ ಮಾಡಬೇಕಿದೆ. ರೈತರಿಗೆ ಒಳ್ಳೆಯದನ್ನು ಮಾಡಬೇಕಿದೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗಿ ಬಂದರೆ, ಸಿಎಂ, ಡಿಸಿಎಂಗೆ ಹತ್ತಿರವಿರುವ ಕಾರಣ ರೈತರಿಗೆ ದರ ಹೆಚ್ಚಳ ಮಾಡಲು ಸಹಕಾರಿಯಾಗಲಿದ್ದು, ಇನ್ನೂ ಹತ್ತು ರೂ. ಹೆಚ್ಚಳ ನೀಡಬೇಕಿದೆ. ಡಿಕೆ ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಿಎಂ ಜೊತೆ ಮಾತನಾಡಿ 5 ರೂ. ಆದರೂ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.