ಅಥಣಿ ನ್ಯೂಜ:- ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ / ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ ಸಚಿವ ಆರ್ ಬಿ ತಿಮ್ಮಾಪುರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಅಥಣಿ : ಸಾಧನೆಗೆ ಬಡತನ, ಜಾತಿ, ಅಡ್ಡಿಯಲ್ಲ, ಸಾಧಿಸುವ ಛಲ, ಸತತ ಪ್ರಯತ್ನವಿದ್ದರೆ ಸಾಧನೆ ಸುಲಭವಾಗುತ್ತದೆ. ಶಿಕ್ಷಣ ಎಂಬುದು ಯಾರೂ ಕದಿಯಲಾರದ ಸಂಪತ್ತು, ಅದನ್ನು ಕಠಿಣ ಪರಿಶ್ರಮದಿಂದ ತಂದೆ ತಾಯಿಯ ಆಶೀರ್ವಾದ ಮತ್ತು ಗುರುಗಳ ಮಾರ್ಗದರ್ಶನದಿಂದ ಪ್ರತಿಯೊಬ್ಬರೂ ಸಂಪಾದಿಸಬೇಕು ಎಂದು ರಾಜ್ಯ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು. ಅವರು ಬುಧವಾರ ಇಲ್ಲಿನ ಸುಕ್ಷೇತ್ರ ಗಚ್ಚಿನ ಮಠದ ಸಭಾಂಗಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿವಿಧ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅನೇಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮುದಾಯದ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಬಡಮಕ್ಕಳು ಈ ಯೋಜನೆಗಳು ಸದುಪಯೋಗ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ತಂದೆ ತಾಯಿಗೆ ಹಾಗೂ ಸಮಾಜದ ಗೌರವವನ್ನು ಹೆಚ್ಚಿಸಬೇಕು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಶಿಸ್ತು, ಸಮಯ ಪಾಲನೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಹೆಚ್ಚಿನ ಜ್ಞಾನವನ್ನು ಸಂಗ್ರಹಿಸುವ ಮೂಲಕ ನಿಮ್ಮ ಗುರಿ ಮುಟ್ಟಲು ಸಾಧ್ಯವಿದೆ. ಸರ್ಕಾರದ ಲಾಭಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸುಂದರವಾದ ಭವಿಷ್ಯ ಕಟ್ಟಿಕೊಳ್ಳಬೇಕು. ಇಂದು ನಿಮ್ಮ ಸಾಧನೆಯನ್ನು ಗುರುತಿಸಿ ಗೌರವಿಸುತ್ತಿರುವ ಸಮಾಜಕ್ಕೆ ಋಣಿಯಾಗಿರಬೇಕೆಂದು ಕರೆ ನೀಡಿದರು.ನನ್ನ ರಾಜಕೀಯ ಜೀವನದಲ್ಲಿ ಮಾದಿಗ ಸಮುದಾಯದ ಮುಖಂಡರು ಮತ್ತು ಮತದಾರರು ಯಾವತ್ತೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಮುಂಬರುವ ದಿನಗಳಲ್ಲಿ ಸಮುದಾಯದ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಿರುವ ಸಮುದಾಯ ಭವನವನ್ನು ನಿರ್ಮಿಸು ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಥಣಿ ಶಾಸಕ
ಲಕ್ಷ್ಮಣ ಸವದಿ
ಹೇಳಿದರು.ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆದ ಅಂತರಾಷ್ಟ್ರೀಯ ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕನ್ನಡ ನಾಡಿನ ಹಾಗೂ ಮಾದಿಗ ಸಮುದಾಯದ ಕೀರ್ತಿ ಹೆಚ್ಚಿಸಿದ ಅಥಣಿ ತಾಲೂಕಿನ ಅಗ್ರಾಣಿ ಇಂಗಳಗಾoವ ಗ್ರಾಮದ ಬಸವರಾಜು ಕುಪೇಂದ್ರ ತಳಗಡೆ ಅವರನ್ನು ಈ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರು ಸನ್ಮಾನಿಸಿದರು.2024 – 25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚಿಗೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಕೊಡ ಮಾಡಿದ ರಾಜ್ಯಮಟ್ಟದ ಮಹಿಳಾ ಸುವರ್ಣ ಸಾಧಕಿ ಪ್ರಶಸ್ತಿ ಪಡೆದುಕೊಂಡಿರುವ ಕೆಪಿಸಿಸಿ ಸಂಯೋಜಕಿ, ಮಾದಿಗ ಸಮುದಾಯದ ನಾಯಕಿ ಸುನಿತಾ ಸೋಮಲಿಂಗ ಐಹೊಳಿ ಅವರನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಬೈಟ್—೧ ೨
ಸಮಾರಂಭದಲ್ಲಿ ಅಥಣಿ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ. ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಪುರಸಭೆ ಸದಸ್ಯರಾದ ವಿದ್ಯಾ ಐಹೊಳೆ. ರಾವಸಾಬ ಐಹೊಳೆ, ಸಮುದಾಯದ ಮುಖಂಡರಾದ ರಾಜೇಂದ್ರ ಐಹೊಳೆ. ಶಂಕರ ಪೂಜಾರಿ. ರಮೇಶ ಸಿಂದಗಿ, ಹನುಮಂತ ಅರ್ದವೂರ. ಮುರುಗೇಶ್ ಅಪ್ಪಾಜಿ. ಸುನಿತಾ ಐಹೊಳೆ. ರಾಜು ಹೆಗ್ಗನವರ. ಸದಾಶಿವ ದೊಡ್ಡಮನಿ, ಅನಿಲ ತಳವಾರ, ಸಂಗಪ್ಪ ಮಾಯನಟ್ಟಿ. ಕುಮಾರ ಗಸ್ತಿ, ಸಿದ್ದಾರ್ಥ್ ಸಿಂಗೆ. ಗಿರೀಶ್ ಬುಟಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕ ಅಧ್ಯಕ್ಷ ಹನುಮಂತ ಅರ್ಧಾ ಯೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ವಾಘಮಾರೆ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಗಸ್ತಿ ವoದಿಸಿದರು.




