ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ನವದೆಹಲಿಯ ಕಚೇರಿಯಲ್ಲಿ ಭೇಟಿಯಾಗಿ ಹಾಸನ ಜಿಲ್ಲೆಯಲ್ಲಿ ಮೆಕ್ಕೆ ಜೋಳಕ್ಕೆ ಕಾಣಿಸಿಕೊಂಡಿರುವ ಬಿಳಿ ಸುಳಿ ರೋಗಬಾಧೆ ಕುರಿತು ಚರ್ಚಿಸಲಾಯಿತು.
ಹಾಸನ 2.50 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಹೊಂದಿದ್ದು ಮುಂಗಾರು ಹಂಗಾಮಿನಲ್ಲಿ ಶೇ. 40 ಅಂದರೆ 1,10,000 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಬಿಳಿ ಸುಳಿ ರೋಗ ಬೆಳೆಗೆ ತಗುಲಿ ನಷ್ಟವುಂಟು ಮಾಡಿದೆ.

45,000 ಹೆಕ್ಟೇರ್ಗಳಲ್ಲಿ ಬಿತ್ತನೆಯಾದ ಜೋಳದ ಪೈಕಿ 12,000 ಹೆಕ್ಟೇರ್ನಲ್ಲಿ ಬಿಳಿ ಸುಳಿ ರೋಗ ಹರಡಿದೆ. ಈ ರೋಗ ಮಣ್ಣಿನಲ್ಲಿ ಹಾಗೂ ಗಾಳಿಯಲ್ಲಿ ಹರಡುವುದರಿಂದ ತ್ವರಿತವಾಗಿ ವ್ಯಾಪಿಸಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹಾಸನ ಕೃಷಿ ಮಹಾವಿದ್ಯಾಲಯ ಮತ್ತು ಮಂಡ್ಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡಗಳು ಇತ್ತೀಚೆಗೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಈ ರೋಗದ ವೇಗದ ಹಬ್ಬುವಿಕೆಯನ್ನು ದೃಢಪಡಿಸಿದ್ದಾರೆ. ಸಮಯಕ್ಕೆ ಸರಿಯಾದ ಜಾಗೃತಿ ಮೂಡಿಸುವಿಕೆ ಮತ್ತು ನಿಯಂತ್ರಣ ಕ್ರಮಗಳಿದ್ದರೂ ಕೂಡ ರೈತರು ಈ ರೋಗವನ್ನು ನಿಯಂತ್ರಿಸಲು ವಿಫಲರಾಗುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ತ್ವರಿತವಾಗಿ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತೇನೆ.
1. ಹಾಸನ ಜಿಲ್ಲೆಯ ಮೆಕ್ಕೆಜೋಳ ಹಾನಿಗೀಡಾದ ಪ್ರದೇಶಗಳಲ್ಲಿ ಸಮಗ್ರ ಪರಿಶೀಲನೆ ನಡೆಸಲು ಐಸಿಎಆರ್ ಅಥವಾ ಇತರ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಗಳಿಂದ ಪರಿಣತ ವಿಜ್ಞಾನಿಗಳ ತಂಡವನ್ನು ನಿಯೋಜಿಸಬೇಕು.
2. ಭವಿಷ್ಯದ ರೋಗದ ಉಲ್ಬಣವನ್ನು ತಡೆಯಲು ಪರಿಣಿತ ಸಲಹೆ ಮತ್ತು ದೀರ್ಘಕಾಲಿಕ ರೋಗ ನಿರ್ವಹಣಾ ತಂತ್ರಗಳನ್ನು ಒದಗಿಸಬೇಕು.
3. ಬೆಳೆಯ ನಷ್ಟ ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು.
ಹಾಸನ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಬೇಕು ಎಂದು ಈ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.




