ರೇಣುಕಾಸ್ವಾಮಿ ಹತ್ಯೆ ಕೇಸ್ : 7 ಜನ ಆರೋಪಿಗಳ ಜಾಮೀನು ರದ್ದು,ಸುಪ್ರೀಂ ಕೋರ್ಟ್ ಆದೇಶದಂತೆ ಕೂಡಲೇ ಬಂಧಿಸಲು ಕ್ರಮ.. ಮುಂದಿನ ಪ್ರಕ್ರಿಯೆಗಳೇನು…!
ಬೆಂಗಳೂರು : ರೇಣುಕಾಸ್ವಾಮಿ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ, ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದ್ದಾರೆ. ಅಲ್ಲದೇ ಈ ಕೂಡಲೇ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಜೈಲಿಗೆ ಹೋಗಬೇಕಿದೆ.

ಆರೋಪಿಗಳಾದ ಪವಿತ್ರಾಗೌಡ, ದರ್ಶನ್ ತೂಗುದೀಪ, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಪ್ರದೋಶ್ ಮತ್ತೆ ಜೈಲು ಸೇರಬೇಕಿದೆ.
ಮುಂದಿನ ಪ್ರಕ್ರಿಯೆಗಳೇನು?
ಜಾಮೀನು ರದ್ದು ಆದೇಶ ಹೊರ ಬೀಳುತ್ತಿದ್ದಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅಲರ್ಟ್ ಆಗಿದ್ದು ಎಲ್ಲಾ 7 ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲು ಸಿದ್ಧತೆ ಆರಂಭಿಸಿದ್ದಾರೆ. ಮೊದಲಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನ ಪಡೆಯಲಿರುವ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್, ಆ ಬಳಿಕ ವಿಚಾರಣಾಧೀನ ನ್ಯಾಯಾಲಯಕ್ಕೆ ಆ ಆದೇಶದ ಪ್ರತಿ ಸಲ್ಲಿಸಲಿದ್ದಾರೆ.
ವಿಚಾರಣಾ ನ್ಯಾಯಾಲಯದಿಂದ ಆರೋಪಿಗಳ ಬಂಧನ ವಾರೆಂಟ್ ಪಡೆಯಲಿರುವ ತನಿಖಾಧಿಕಾರಿಗಳು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಿದ್ದಾರೆ. ಒಂದು ವೇಳೆ ಆರೋಪಿಗಳೇ ನೇರವಾಗಿ ಶರಣಾದರೆ ಬಂಧನದ ವಾರೆಂಟ್ ಪಡೆಯುವ ಅವಶ್ಯಕತೆಯಿರುವುದಿಲ್ಲ. ಆರೋಪಿಗಳನ್ನ ನೇರವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿರುವ ಪೊಲೀಸರು, ಈ ಹಿಂದೆ ಜಾಮೀನು ಸಿಗುವ ಮುನ್ನ ಆರೋಪಿಗಳು ಇದ್ದ ಆಯಾ ಕಾರಾಗೃಹಗಳಿಗೆ ವರ್ಗಾಯಿಸಲಿದ್ದಾರೆ.
ಇನ್ನು ವಿಪರ್ಯಾಸವೆಂದರೆ ಆರೋಪಿ ದರ್ಶನ್ ಅವರ ಬಂಧನವಾಗುವ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರು ಪ್ರಸ್ತುತ ಕೇಂದ್ರ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿಯಾಗಿದ್ದಾರೆ. ಅಂದು ಹತ್ಯೆ ಪ್ರಕರಣದಲ್ಲಿ ದರ್ಶನ್ ಪಾತ್ರ ಕಂಡುಬರುತ್ತಿದ್ದಂತೆ ಮುಲಾಜಿಲ್ಲದೇ ಬಂಧಿಸುವಂತೆ ತನಿಖಾಧಿಕಾರಿಗಳಿಗೆ ಬಿ.ದಯಾನಂದ್ ಸೂಚಿಸಿದ್ದರು.ಇಂದು ದಯಾನಂದ್ ಮುಖ್ಯಸ್ಥರಾಗಿ ಜೈಲಿಗೆ ದರ್ಶನ್ ಮತ್ತೊಮ್ಮೆ ಖೈದಿಯಾಗಿ ಕಾಲಿಡಬೇಕಿದೆ.



