ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಸೊಸೆ! ಸಂಬಳದಲ್ಲಿ ಶೇ 25 ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ
ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಸೊಸೆ! ಸಂಬಳದಲ್ಲಿ ಶೇ 25 ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ
ಪತಿಯ ಸಾವಿನ ನಂತರ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಪಡೆದು, ಅತ್ತೆಯನ್ನು ನಡುನೀರಿನಲ್ಲಿ ಬಿಟ್ಟು ಮರುಮದುವೆಯಾಗಿದ್ದ ಸೊಸೆಗೆ ರಾಜಸ್ಥಾನ ಹೈಕೋರ್ಟ್ ಚಾಟೀಟು ಬೀಸಿದೆ. ಕುಟುಂಬವನ್ನು ನೋಡಿಕೊಳ್ಳುವ ಭರವಸೆ ನೀಡಿ ನೌಕರಿ ಪಡೆದಿದ್ದ ಸೊಸೆಯ ಮಾಸಿಕ ವೇತನದಲ್ಲಿ ಶೇ. 25 ರಷ್ಟನ್ನು ಜೀವಿತಾವಧಿಯವರೆಗೆ ಅತ್ತೆಗೆ ನೀಡಬೇಕು ಮತ್ತು ಮೃತನ ಸೇವಾ ಸೌಲಭ್ಯಗಳನ್ನು ಇಬ್ಬರಿಗೂ ಸಮನಾಗಿ ಹಂಚಬೇಕೆಂದು ನ್ಯಾಯಾಲಯ ಆದೇಶಿಸಿದೆ.
- ಪತಿಯ ಸಾವಿನ ನಂತರ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಪಡೆದ ಮಹಿಳೆ ಕುರಿತು ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶ.
- ಸೊಸೆಯ ಮಾಸಿಕ ವೇತನದಲ್ಲಿ ಶೇ. 25 ರಷ್ಟನ್ನು ಜೀವಿತಾವಧಿಯವರೆಗೆ ಅತ್ತೆಗೆ ನೀಡಬೇಕು.
- ಮೃತನ ಸೇವಾ ಸೌಲಭ್ಯಗಳನ್ನು ಇಬ್ಬರಿಗೂ ಸಮನಾಗಿ ಹಂಚಬೇಕೆಂದು ನ್ಯಾಯಾಲಯ ಆದೇಶಿಸಿದೆ.

ರಾಜಸ್ಥಾನದ ಸಿಕಾರ್ ಮೂಲದ ವರ್ಮಾ ಎಂಬುವರು ಅಜ್ಮೀರ್ ವಿದ್ಯುತ್ ವಿತರಣಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, 2017ರ ಮಾರ್ಚ್ನಲ್ಲಿ ಅಕಾಲಿಕ ಮರಣ ಹೊಂದಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದರಿಂದ, ನಿಯಮಾನುಸಾರ ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ವಿದ್ಯುತ್ ಇಲಾಖೆ ಮುಂದಾಯಿತು.
ಆ ಸಂದರ್ಭದಲ್ಲಿ, “ನನ್ನ ಅತ್ತೆ-ಮಾವನನ್ನು ನಾನೇ ಆಜೀವ ಪರ್ಯಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಲಿಖಿತ ಪ್ರಮಾಣಪತ್ರ ನೀಡಿದ ಕಾರಣ, ಮೃತ ವರ್ಮಾ ಅವರ ತಾಯಿ ಹಾಗೂ ತಂದೆ ಸೊಸೆಯ ಉದ್ಯೋಗಕ್ಕೆ ಸಮ್ಮತಿ ಸೂಚಿಸಿದ್ದರು.
ಕೆಲಸ ಸಿಕ್ಕ ಬೆನ್ನಲ್ಲೇ ವರಸೆ ಬದಲು!
ಆದರೆ, ಸರ್ಕಾರಿ ನೌಕರಿ ಕೈಸೇರುತ್ತಿದ್ದಂತೆ ಸೊಸೆಯ ವರ್ತನೆ ಸಂಪೂರ್ಣ ಬದಲಾಯಿತು. ವೃದ್ಧ ಅತ್ತೆ-ಮಾವನಿಗೆ ಯಾವುದೇ ಆರ್ಥಿಕ ನೆರವು ನೀಡದೆ, ಅವರನ್ನು ಅನಾಥರನ್ನಾಗಿ ಮಾಡಿ ಆಕೆ ಮನೆಯಿಂದ ಹೊರನಡೆದಳು. ಅಷ್ಟೇ ಅಲ್ಲದೆ, ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾಗಿ ಹೊಸ ಜೀವನ ಆರಂಭಿಸಿದಳು. ಇತ್ತ ಆಸರೆಯೂ ಇಲ್ಲದೆ, ಊಟಕ್ಕೂ ಗತಿಯಿಲ್ಲದೆ ಕಂಗಾಲಾದ ಅತ್ತೆ (ದೇವಿ), ನ್ಯಾಯಕ್ಕಾಗಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಖಡಕ್ ಮಾತುಗಳು
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಸೊಸೆಯ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಕುಟುಂಬ ಎಂದರೆ ಕೇವಲ ಪತ್ನಿಯೊಬ್ಬಳೇ ಅಲ್ಲ: “ಅನುಕಂಪದ ಆಧಾರದ ನೌಕರಿಯು ಕೇವಲ ಪತ್ನಿಗೆ ಮಾತ್ರ ಸಿಗುವ ವೈಯಕ್ತಿಕ ಸವಲತ್ತಲ್ಲ. ಅಕಾಲಿಕವಾಗಿ ಕುಟುಂಬದ ಆಧಾರ ಸ್ತಂಭವನ್ನು ಕಳೆದುಕೊಂಡ ಇಡೀ ಕುಟುಂಬಕ್ಕೆ ನೆರವಾಗಲು ಇದನ್ನು ನೀಡಲಾಗುತ್ತದೆ. ಕುಟುಂಬ ಎಂದರೆ ಅದರಲ್ಲಿ ಮೃತರ ವೃದ್ಧ ಪೋಷಕರೂ ಸೇರುತ್ತಾರೆ.”
ಬದ್ಧತೆಯಿಂದ ನುಣುಚಿಕೊಳ್ಳುವಂತಿಲ್ಲ: “ಪೋಷಕರನ್ನು ಪೋಷಿಸುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟು ನೌಕರಿ ಪಡೆದ ಮೇಲೆ, ಆ ನೈತಿಕ ಮತ್ತು ಕಾನೂನುಬದ್ಧ ಜವಾಬ್ದಾರಿಯಿಂದ ಸೊಸೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ವೃದ್ಧ ಅತ್ತೆಯನ್ನು ವಿಧಿಯ ಕೈಗೆ ಒಪ್ಪಿಸಿ, ತಾನು ಮಾತ್ರ ಬೇರೆ ಮದುವೆಯಾಗಿ ಆರಾಮವಾಗಿರುವುದು ಅನುಕಂಪದ ನೌಕರಿ ಯೋಜನೆಯ ಮೂಲ ಆಶಯಕ್ಕೇ ಬಗೆದ ದ್ರೋಹ,” ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ.
ಹೈಕೋರ್ಟ್ ನೀಡಿದ ಆದೇಶವೇನು?
ಸೊಸೆಯ ಮಾಸಿಕ ವೇತನದಲ್ಲಿ ಪ್ರತಿ ತಿಂಗಳು ಶೇಕಡಾ 25 ರಷ್ಟು ಹಣವನ್ನು ಕಡಿತಗೊಳಿಸಿ, ಅದನ್ನು ಅತ್ತೆಯ ಜೀವಿತಾವಧಿಯವರೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಮೃತ ನೌಕರನಿಗೆ (ಗಂಡನಿಗೆ) ಬರಬೇಕಿದ್ದ ಗ್ರಾಚ್ಯುಟಿ, ಪಿಂಚಣಿ ಸೇರಿದಂತೆ ಇನ್ನಿತರ ಸೇವಾ ಸೌಲಭ್ಯಗಳ ಒಟ್ಟು ಮೊತ್ತವನ್ನು ತಾಯಿ ಮತ್ತು ಪತ್ನಿ ಇಬ್ಬರಿಗೂ ಸಮನಾಗಿ (ಶೇ. 50-50 ರಂತೆ) ಹಂಚಿಕೆ ಮಾಡಬೇಕು ಎಂದು ಅಜ್ಮೀರ್ ವಿದ್ಯುತ್ ವಿತರಣಾ ನಿಗಮಕ್ಕೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.


