ಸೆ. 5ರ CJP ಮೆರವಣಿಗೆಗೆ ನಿರ್ಬಂಧ ಇಲ್ಲ : ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸೆಪ್ಟೆಂಬರ್ 5ರಂದು ದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಮೆರವಣಿಗೆಗೆ ನಿರ್ಬಂಧ ವಿಧಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.
ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಲಿದೆ ಎಂದು ಊಹಿಸಲು ಸದ್ಯ ಯಾವುದೇ ‘ಬಲವಾದ ಕಾರಣ’ ಇಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಹೇಳಿದರು. ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ತಿಳಿಸಿದರು.
‘ಎಲ್ಲ ಕಡೆಯವರು ಶಾಂತಿಯುತವಾಗಿ, ಜವಾಬ್ದಾರಿಯುತವಾಗಿ ಹಾಗೂ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು’ ಎಂದು CJI ಹೇಳಿದರು
ಸೆಪ್ಟೆಂಬರ್ 12 ಮತ್ತು 13ರಂದು ರಾಷ್ಟ್ರ ರಾಜಧಾನಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಸೆ. 5ರಂದು CJP ಉದ್ದೇಶಿಸಿರುವ ಮೆರವಣಿಗೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಸಾಮೂಹಿಕ ಚಳವಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಅನ್ನು ‘ಎಳೆದು ತರುತ್ತಿರುವುದು’ ದುರದೃಷ್ಟಕರ ಎಂದು CJP ಸಹ ಸಂಚಾಲಕ ಸೌರವ್ ದಾಸ್ ಇದಕ್ಕೂ ಮುನ್ನ ಹೇಳಿದ್ದರು. ‘ಇಂತಹ ಅರ್ಜಿದಾರರು ಹಳಿ ತಪ್ಪದಿರುವುದು ಒಳ್ಳೆಯದು’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಕಳೆದ ವಾರ CJP, ಜುಲೈ 25ರಂದು ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಸೆ. 5ರಂದು ಇಂಡಿಯಾ ಗೇಟ್‌ನಿಂದ ದಿಲ್ಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಘೋಷಿಸಿತ್ತು.
ಸೆ. 5ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯಲ್ಲಿ, ಮೃತಪಟ್ಟ NEET ಸಂತ್ರಸ್ತರ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ ಎಂದು ಪಕ್ಷವು ಪ್ರಮುಖ ಪತ್ರಿಕಾಗೋಷ್ಠಿಯ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು
‘ಮೃತ ನೀಟ್ ಸಂತ್ರಸ್ತರ ಕುಟುಂಬಗಳು ಮತ್ತು ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೇತೃತ್ವದಲ್ಲಿ ಸೆ. 5ರಂದು ಇಂಡಿಯಾ ಗೇಟ್‌ನಿಂದ ಹೊಸದಿಲ್ಲಿಯ ಪೊಲೀಸ್ ಪ್ರಧಾನ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ದೇಶದಾದ್ಯಂತದ ವಿದ್ಯಾರ್ಥಿಗಳು ಮತ್ತು ಯುವ ಜನತೆ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಅಥವಾ ರದ್ದುಗೊಳಿಸುವುದು, ಮೃತಪಟ್ಟ ನೀಟ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವುದು ಸೇರಿದಂತೆ ದೇಶದ ಯುವಜನರಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಕುರಿತು ಪರಿಶೀಲಿಸಲು CJPಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಸಿತ್ತು. ಈ ಸಭೆಯ ಬಳಿಕ ಸೆ. 5ರ ಮೆರವಣಿಗೆ ಘೋಷಿಸಲಾಗಿತ್ತು.



