ನಿನ್ನೆ ರಾತ್ರಿ ಆದೇಶ, ಇಂದು ಬೆಳಗ್ಗೆ ಕಟ್ಟುನಿಟ್ಟಿನ ಪಾಲನೆ: ಹುಬ್ಬಳ್ಳಿಯಲ್ಲಿ ಸುಗಮ ಸಂಚಾರಕ್ಕೆ ನೂತನ ಕಮಿಷನರ್ ಕ್ರಮ
ನಿನ್ನೆ ರಾತ್ರಿ ಆದೇಶ, ಇಂದು ಬೆಳಗ್ಗೆ ಕಟ್ಟುನಿಟ್ಟಿನ ಪಾಲನೆ: ಹುಬ್ಬಳ್ಳಿಯಲ್ಲಿ ಸುಗಮ ಸಂಚಾರಕ್ಕೆ ನೂತನ ಕಮಿಷನರ್ ಕ್ರಮ
ಸುಗಮ ಸಂಚಾರ ನಿರ್ವಹಣೆ ಕಾರ್ಯರೂಪಕ್ಕೆ ಬಂದಿದ್ದು, ಕರ್ತವ್ಯ ನಿರತ ಸಂಚಾರಿ ಪೊಲೀಸರು ಆಯುಕ್ತರ ಆದೇಶ ಪಾಲಿಸುತ್ತಿದ್ದಾರೆ.
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಭೂಷಣ ಬೊರಸೆ ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ನಿರ್ವಹಣೆಯ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧ್ಯಾಹ್ನ ಅಧಿಕಾರ ಸ್ವೀಕರಿಸಿ ರಾತ್ರಿ ವೇಳೆಗೆ ಆದೇಶ ಹೊರಡಿಸಿ, ಬೆಳಗ್ಗೆ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಅವಳಿ ನಗರ ಅತೀ ವೇಗವಾಗಿ ಬೆಳೆಯುತ್ತಿದ್ದು, ವಾಹನ ದಟ್ಟಣೆ ದೊಡ್ಡ ಸವಾಲಾಗಿದೆ. ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯೂ ಕೂಡ ಸುಗಮ ಸಂಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವಳಿ ನಗರ ಸಂಚಾರಿ ಠಾಣೆ ಪೊಲೀಸರು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನೂತನವಾಗಿ ಅಧಿಕಾರ ಸ್ಚೀಕರಿಸಿದ ಕಮಿಷನರ್ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುಗಮ ಸಂಚಾರಕ್ಕೆ ನೂತನ ಕಮಿಷನರ್
ಇಂದು ಬೆಳಗ್ಗೆಯಿಂದಲೇ ಅದು ಕಾರ್ಯರೂಪಕ್ಕೆ ಬಂದಿದೆ. ಇಂದು ಕರ್ತವ್ಯ ನಿರತ ಸಂಚಾರಿ ಪೊಲೀಸರು ಆಯುಕ್ತರ ಆದೇಶ ಪಾಲಿಸುತ್ತಿದ್ದಾರೆ. ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯವಾಗಿ ಧರಿಸಿದ್ದು, ಆಯುಕ್ತರ ಆದೇಶ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದೇಶದಲ್ಲಿ ಪ್ರಮುಖವಾಗಿ ಹೆಚ್ಚು ವಾಹನ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ವಾಹನ ಸಂಚಾರ ಸುಗಮಗೊಳಿಸುವ ಕರ್ತವ್ಯ ಬಿಟ್ಟು ವಾಹನ ಚಾಲಕರಿಗೆ ದಂಡ ವಿಧಿಸುವಂತಿಲ್ಲ. ದಂಡ ವಿಧಿಸುವಂತಹ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು. ಒಂದು ವೇಳೆ ಬಾಡಿ ವೋರ್ನ್ ಕ್ಯಾಮೆರಾ ಧರಿಸದೇ ದಂಡ ಹಾಕಿದ್ದಲ್ಲಿ ಅಂತಹವರ ಫೋಟೋವನ್ನು ತೆಗೆದು, ದಿನಾಂಕ ಸ್ಥಳದ ವಿವರದೊಂದಿಗೆ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 9480802002ಗೆ ನೀಡಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ, ಸೀಟ್ ಬೆಲ್ಟ್ ಇಲ್ಲದೇ, ಮೊಬೈಲ್ನಲ್ಲಿ ಮಾತನಾಡ್ತಾ ವಾಹನ ಚಾಲನೆ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸಬೇಕು. ಸಂಚಾರ ಘಟಕದ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು, ಸಾರ್ವಜನಿಕರ ಪ್ರಾಣ ಕಾಪಾಡುವುದು ಆದ್ಯ ಕರ್ತವ್ಯವಾಗಿರಬೇಕು. ಈ ಸೂಚನೆಗಳನ್ನು ಅಪರಾಧ ಮತ್ತು ಸಂಚಾರ ಡಿಸಿಪಿ ಮೇಲ್ವಿಚಾರಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು – ಕಮಿಷನರ್:ಈ ಕುರಿತಂತೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ವಾಹನ ತಪಾಸಣೆ ಹಿನ್ನೆಲೆ ಹೆಚ್ಚು ಹೆಚ್ಚು ದೂರುಗಳು ಬರುತ್ತಿವೆ. ಹೀಗಾಗಿ ಸಂಚಾರಿ ಪೊಲೀಸರು ಕಟ್ಟುನಿಟ್ಟಾಗಿ ಬಾಡಿ ವೋರ್ನ್ ಕ್ಯಾಮರಾ ಬಳಕೆ ಕಡ್ಡಾಯ ಮಾಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಯಂತ್ರಣವಾಗಲಿದೆ. ವಾಹನ ಸವಾರರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಬಾರದೆಂದರು.
ಸಾರ್ವಜನಿಕರಿಂದ ಪ್ರಶಂಸೆ:ಈ ಆದೇಶ ನಗರದ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ‘ಇಷ್ಟು ದಿನ ಟ್ರಾಫಿಕ್ ಕಿರಿಕಿ ಅನುಭವಿಸುತ್ತಿದ್ದ ವಾಹನ ಸವಾರರು ಈಗ ನಿರಾಳರಾಗಿದ್ದಾರೆ. ಇಷ್ಟು ದಿನ ಟ್ರಾಫಿಕ್ ಕಿರಿಕಿರಿಯಿಂದ ಸಾಕಷ್ಟು ಹೈರಾಣಾಗಿದ್ದೆವು. ಈಗ ಹೊಸ ಕಮಿಷನರ್ ಬಂದ ಮೇಲೆ ಹೊಸ ಆದೇಶ ಹೊರಡಿಸಿದ್ದರಿಂದ ಬೆಳಗಿನ ಸಮಯದಲ್ಲಿ ಟ್ರಾಫಿಕ್ ಹೆಚ್ಚಿರುವಾಗ ಪೊಲೀಸರು ಲೈಸನ್ಸ್ ಪರಿಶೀಲನೆ ಮಾಡದೇ ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದಾರೆ. ಇದು ಸ್ವಾಗತಾರ್ಹವಾಗಿದೆ’



