ಬರಪೀಡಿತ ತಾಲ್ಲೂಕುಗಳ ಘೋಷಣೆ: ಬೆಳಗಾವಿಯ ಒಂದು ತಾಲ್ಲೂಕಿಗೂ ಪಟ್ಟಿಯಲ್ಲಿಲ್ಲ ಸ್ಥಾನ

ಬೆಳಗಾವಿ: ರಾಜ್ಯ ಸರ್ಕಾರ ಗುರುವಾರ ಬಿಡುಗಡೆಗೊಳಿಸಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಒಂದು ತಾಲ್ಲೂಕು ಸೇರ್ಪಡೆಯಾಗದ್ದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಸಪ್ತ ನದಿಗಳು ಹರಿದಿರುವ ಜಿಲ್ಲೆ ಬೆಳಗಾವಿ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 7.52 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 7.36 ಲಕ್ಷ ಹೆಕ್ಟೇರ್‌ನಲ್ಲಿ(ಶೇ 98) ರೈತರು ಉದ್ದು, ಹೆಸರು, ಗೋವಿನಜೋಳ, ತೊಗರಿ ಮತ್ತಿತರ ಬೆಳೆ ಬಿತ್ತಿದ್ದರು.
ಆದರೆ, ಮಳೆ ಕೈಕೊಟ್ಟ ಕಾರಣ ನಿರೀಕ್ಷೆಯಂತೆ ಇಳುವರಿ ಬಂದಿರಲಿಲ್ಲ. ಶೇಂಗಾ ಬೆಳೆ ಕಾಯಿ ಕಟ್ಟಿರಲಿಲ್ಲ. ಬಳ್ಳಿಯೂ ಬೆಳೆದಿರಲಿಲ್ಲ.
ಜಿಲ್ಲೆಯ 15 ತಾಲ್ಲೂಕುಗಳ ಪೈಕಿ ಯರಗಟ್ಟಿ, ಸವದತ್ತಿ, ರಾಮದುರ್ಗ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಆಯಾ ಕ್ಷೇತ್ರಗಳ ಶಾಸಕರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ವತಃ ರೈತರ ಕೃಷಿಭೂಮಿಗೆ ಹೋಗಿ, ಬೆಳೆಗಳ ಸ್ಥಿತಿ–ಗತಿ ಪರಿಶೀಲಿಸಿದ್ದರು. ‘ನಮ್ಮ ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಬೇಕು’ ಎಂದು ರೈತರು ಆಗ್ರಹಿಸಿದ್ದರು. ಆದರೆ, ಸರ್ಕಾರ ಪ್ರಕಟಿಸಿದ ಪಟ್ಟಿಯಲ್ಲಿ ಒಂದೇ ತಾಲ್ಲೂಕಿಗೂ ಸ್ಥಾನ ಸಿಗದಿರುವುದು ರೈತರನ್ನು ಕಂಗೆಡಿಸಿದೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ರೈತರು, ‘ಮಳೆ ಕೊರತೆಯಿಂದ ಬೆಳೆಗಳೆಲ್ಲ ಒಣಗಿವೆ. ಆದರೆ, ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಒಂದೇ ತಾಲ್ಲೂಕು ಸೇರಿಸದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರ ಘೋಷಣೆ ಸಾಧ್ಯತೆ
‘ಬೆಳೆಹಾನಿಯಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಶೀಘ್ರವೇ ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಬರಪೀಡಿತವೆಂದು ಘೋಷಣೆಯಾಗುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ‘ ಪ್ರತಿಕ್ರಿಯಿಸಿದರು.




