Cockroach Janata Party ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು; CJPಯ ಸ್ಕೂಲ್ ಟೀಕ್ ಕರೋ ಅಭಿಯಾನದ ವೇಳೆ ಆಗಿದ್ದಾದರೂ ಏನು?
Cockroach Janata Party ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು; CJPಯ ಸ್ಕೂಲ್ ಟೀಕ್ ಕರೋ ಅಭಿಯಾನದ ವೇಳೆ ಆಗಿದ್ದಾದರೂ ಏನು?
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಸರ್ಕಾರಿ ಶಾಲೆಗಳ ಪರಿಶೀಲನೆಗೆ ತೆರಳಿದ್ದಾಗ ಸ್ಥಳೀಯ ಗ್ರಾಮಸ್ಥರು ಮತ್ತು ರಾಜಕೀಯ ಕಾರ್ಯಕರ್ತರು ಅವರನ್ನು ತಡೆದು, ಜಗಳ ನಡೆಸಿ ಅಟ್ಟಾಡಿಸಿ ಹೊಡೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಬಾಗ್ರು/ರಾಂಪುರ (ಜೈಪುರ): ರಾಜಸ್ಥಾನದ ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ-ಕನ್ವರ್‌ಪುರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ, ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಸ್ಥಳೀಯ ಗ್ರಾಮಸ್ಥರು ಅಟ್ಟಾಡಿಸಿ ಹೊಡೆದಿರುವ ಘಟನೆ ವರದಿಯಾಗಿದೆ. ಸಿಜೆಪಿ ಹಮ್ಮಿಕೊಂಡಿದ್ದ ‘ಸ್ಕೂಲ್ ಟೀಕ್ ಕರೋ’ (ಶಾಲಾ ತಪಾಸಣೆ) ಅಭಿಯಾನದ ವೇಳೆ ಈ ಹಲ್ಲೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ರಾಂಪುರ ವ್ಯಾಪ್ತಿಯ ಕಾನ್ವರ್‌ಪುರದಲ್ಲಿರುವ ಸರ್ಕಾರಿ ಶಾಲೆಯೊಂದು ಕಳೆದ ಹಲವು ವರ್ಷಗಳಿಂದ ದನಗಳ ಕೊಟ್ಟಿಗೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ, ಸಿಜೆಪಿ ತಂಡವು ಅದರ ಆಡಿಟ್ ಮಾಡಲು ಮತ್ತು ಪರಿಶೀಲನೆ ನಡೆಸಲು ಅಲ್ಲಿಗೆ ಭೇಟಿ ನೀಡಿತ್ತು. ಆದರೆ, ಕಾಕ್ರೋಚ್ ಜನತಾ ಪಾರ್ಟಿಯ ಸಹ-ಸಂಚಾಲಕ ಹಾಗೂ ವಕ್ತಾರ ಅಶುತೋಷ್ ರಾಂಕಾ ನೇತೃತ್ವದ ತಂಡವು ಗ್ರಾಮಕ್ಕೆ ಪ್ರವೇಶಿಸಲು ಯತ್ನಿಸಿದಾಗ ಸ್ಥಳೀಯ ಗ್ರಾಮಸ್ಥರು ಮತ್ತು ರಾಜಕೀಯ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ. “ನಮ್ಮ ಮಕ್ಕಳು ಎಲ್ಲೇ ಓದಿದರೂ ನಮಗೆ ತೊಂದರೆಯಿಲ್ಲ, ಹೊರಗಿನವರು ಬಂದು ರಾಜಕೀಯ ಮಾಡುವುದು ಬೇಡ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಾಲೆಯ ಅಭಿವೃದ್ಧಿಗೆ ಈಗಾಗಲೇ ಹನ್ನೆರಡು ಲಕ್ಷ ರೂಪಾಯಿ ಅನುಮೋದನೆಯಾಗಿದೆ ಎಂದು ಗ್ರಾಮಸ್ಥರು ವಾದಿಸಿದರು. ಈ ವೇಳೆ ಎರಡೂ ತಂಡಗಳ ನಡುವೆ ತೀವ್ರ ವಾಗ್ವಾದ ನಡೆದು ಪರಿಸ್ಥಿತಿ ಕೈಮೀರಿದೆ. ಕೋಪಗೊಂಡ ಗ್ರಾಮಸ್ಥರು ಮತ್ತು ಸ್ಥಳೀಯರು ಸಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿ, ತಳ್ಳಿ ಕೆಡವಿ ಹಲ್ಲೆ ನಡೆಸಿದ್ದಾರೆ.




