ಹುಬ್ಬಳ್ಳಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಚಿಂತನ, ಮಂಥನ ಸಭೆ; ಕಾವೇರಿದ ಹೋರಾಟ ಕಿಚ್ಚು

ಹುಬ್ಬಳ್ಳಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಚಿಂತನ, ಮಂಥನ ಸಭೆ; ಕಾವೇರಿದ ಹೋರಾಟ ಕಿಚ್ಚು
ಹುಬ್ಬಳ್ಳಿ: ಪ್ರತಿಯೊಂದು ಸಮಾಜದ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದೀಗ ಮಠಾಧೀಶರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಚಿಂತನ-ಮಂಥನ ಸಭೆಯ ಮೂಲಕ ಹಿಂದುಳಿದ ಮಠಗಳ ಮಠಾಧೀಶರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.
ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾದಿಂದ, ಬ್ರಹ್ಮರ್ಷಿ ಶ್ರೀ ರಾಜು ಗುರು ಸ್ವಾಮೀಜಿಯವರ ನೇತೃತ್ವದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ನಾಯಕರ ಮತ್ತು ನಾಯಕತ್ವದ ಉಳಿವಿಗಾಗಿ ಈ ಚಿಂತನ-ಮಂಥನ ಸಭೆಯನ್ನು ಆಯೋಜಿಸಲಾಗಿದೆ.
ರಾಜ್ಯಮಟ್ಟದ ವಿಚಾರ ಸಂಕಿರಣ
ಇದೇ 25ರಂದು ಬೆಳಿಗ್ಗೆ 11:00 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. “ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕ ರಾಜ್ಯದ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗದ ನಾಯಕರಿಗೆ ಆಗಿರುವ ಅನ್ಯಾಯ” ಎಂಬ ವಿಷಯದ ಕುರಿತು ಈ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಲ್ಲಿಕಾ ಘಂಟಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ, ಹಿಂದುಳಿದ ವರ್ಗದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ.
ಸಮಾವೇಶದ ಅಂಗವಾಗಿ ಬ್ರಹ್ಮರ್ಷಿ ಶ್ರೀ ರಾಜು ಗುರು ಸ್ವಾಮೀಜಿಯವರು ವೇದವ್ಯಾಸ ದೇವರ ವ್ಯಾಸ ಪೀಠದ ಪೂಜೆ ನೆರವೇರಿಸಲಿದ್ದಾರೆ. ಸಾಮಾಜಿಕ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಕೆ.ಎಸ್. ಈಶ್ವರಪ್ಪನವರು ದೇಶಾದ್ಯಂತ ಹೋರಾಟ ರೂಪಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್, ಬಾಬುರಾವ್ ಚಿಂಚನಸೂರ್, ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಭಾಗವಹಿಸಿ ಬೆಂಬಲ ಸೂಚಿಸಲಿದ್ದಾರೆ.



